ಪೆಲ್ಟೊಫೋರಮ್ -    ಲೆಗ್ಯೂಮಿನೋಸೀ ಕುಟುಂಬದ ಸಿಸಾಲ್‍ಪಿನೇ ಉಪಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ.

  	ಇದು 15-20  ಮೀ. ಎತ್ತರ ಬೆಳೆಯುವ ಗಟ್ಟಿ ಕಾಂಡದ ಮರ.  ತೊಗಟೆ ಮೃದು ; ಬೂದು ಬಣ್ಣಕ್ಕಿದೆ.  ಎಲೆಗಳು ಭಿನ್ನಪತ್ರ ಮಾದರಿಯವು.  ಹೂಗಳು ರೆಸೀಮ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.  ಇವಕ್ಕೆ ಸುವಾಸನೆಯೂ ಹಳದಿ ಬಣ್ಣವೂ ಉಂಟು.  ಹೂ ಅರಳುವ ಸಮಯ ಮಾರ್ಚ್ ತಿಂಗಳಿಂದ ಜುಲೈ ತಿಂಗಳು.  ಹೂ ಅರಳಿದಾಗ ಮರ ಹಳದಿ ಬಣ್ಣದ ಕಿರೀಟವನ್ನು ಧರಿಸಿದಂತೆ ಕಾಣುತ್ತದೆ.  ಹೂವಿನಲ್ಲಿ 5 ಪತ್ರಗಳ ಪುಷ್ಪಪಾತ್ರೆ, 5 ದಳ, 10 ಕೇಸರ ಮತ್ತು ಉಚ್ಚ ಸ್ಥಾನದ ಒಂದೇ ಕಾರ್ಪೆಲಿನ ಅಂಡಾಶಯ ಉಂಟು.

	ಪೆಲ್ಟೊಫೋರಮ್ಮನ್ನು ಬೀಜಗಳಿಂದಲೂ ರೆಂಬೆಗಳಿಂದಲೂ ಅಭಿವೃದ್ಧಿ ಮಾಡುವುದುಂಟು.  ಈ ಮರದಲ್ಲಿ ಗಾಳಿ ಬಡಿತ ತಡೆಯುವ ಶಕ್ತಿಯಿರುವುದರಿಂದ, ಕಾಫಿ, ಕೋಕೋ ತೋಟಗಳ ಅಂಚಿನಲ್ಲಿ ನೆಟ್ಟು ಬೆಳೆಸುವುದಿದೆ.  

	ಇದರ ಚೌಬೀನೆಯಿಂದ ಹಲಗೆ, ಮುಂತಾದ ಸಾಮಾನಗಳನ್ನು ಮಾಡುವುದುಂಟು.  ತೊಗಟೆಯನ್ನು ಟ್ಯಾನಿನ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.  ಮರ ಮತ್ತು ಎಲೆಗಳಿಂದಲೂ ಟ್ಯಾನಿನ್ ತಯಾರಿಸಬಹುದು.  ಎಲೆಗಳು ದನಕರುಗಳ ಮೇವು, ಎಲೆಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ಇದೆ.  ಇದರಿಂದ ಅಮೈನೋ ಆಮ್ಲಗಳನ್ನು ತಯಾರಿಸಿ ಔಷಧಿಗಳಲ್ಲಿ ಬಳಸುವುದಿದೆ.  ಪೆಲ್ಟೊಫೋರಮ್ಮನ್ನು ಅಲಂಕಾರಕ್ಕಾಗಿ ಉದ್ಯಾನವನಗಳಲ್ಲಿ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಳೆಸುವುದು ಬಲು ಸಾಮಾನ್ಯ.	(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ